ಏಬ್ರಹಾಂ, ಅ ಸಾಂಟಕ್ಲಾರ: 1644-1709. ಜರ್ಮನಿಯ ಧರ್ಮಬೋಧಕ. ವಿಡಂಬನಕಾರ. ಸಾಂಟಕ್ಲಾರ ಎಂಬುದು ಕೆಥೊಲಿಕ್ ಪಂಥದ ಸನ್ಯಾಸಿಯಾಗಿ ಆತ ತೆಗೆದುಕೊಂಡ ಹೆಸರು. ಉಲ್ರಿಚ್ ಮೆಗೆರ್ಲೆ ಎಂಬುದು ಅವನ ಮೊದಲಿನ ಹೆಸರು. ದಕ್ಷಿಣ ಬೇಡೆನ್ ಪ್ರಾಂತ್ಯದ ಮೆಸ್ಕರ್ಚ್ ಎಂಬೆಡೆ ಹುಟ್ಟಿದ ಆತ ಕಾಲಕ್ರಮೇಣ ವಿಯನ್ನ ನಗರದಲ್ಲಿ ರಾಜಾಸ್ಥಾನದ ಬೋಧಕನಾದ (1677). ಆದರೆ ಇತರ ಬೋಧಕರಂತೆ ಆತ ಶ್ರೀಮದ್ಗಾಂಭೀರ್ಯದ ಮುಸುಕನ್ನು ಹೊದೆದವನಲ್ಲ. ಹಾಸ್ಯ ಮತ್ತು ವಿಡಂಬನೆಗಳು ಅವನಿಗೆ ಹುಟ್ಟುಗುಣಗಳಾಗಿ ಬಂದಿದ್ದುವು. 1679ರಲ್ಲಿ ವಿಯನ್ನದಲ್ಲಿ ಪ್ಲೇಗ್ವ್ಯಾಧಿ ಹರಡಿತು. ಆಗ ಆತ ಧರ್ಮಬೋಧನೆಯನ್ನು ಸ್ವಲ್ಪಕಾಲ ನಿಲ್ಲಿಸಬೇಕಾಯಿತು. ಹೀಗೆ ದೊರೆತ ವಿರಾಮವನ್ನು ಲೇಖನಕಾರ್ಯದಲ್ಲಿ ಕಳೆದ. ವಾಚಕರ ಆಲಸ್ಯವನ್ನು ಹೋಗಲಾಡಿಸುವ ಸಾಮರ್ಥ್ಯ ಆತನ ಬರೆಹಗಳ ಮುಖ್ಯ ಗುಣ. 1683ರಲ್ಲಿ ವಿಯನ್ನ ತುರ್ಕಿಯ ಸೇನೆಗಳ ಮುತ್ತಿಗೆಗೆ ಗುರಿಯಾದಾಗ ಅವುಫ್, ಅವುಫ್, ಇಹ್ರ್‌ ಕ್ರಿಶ್ಚಿಯನ್ (ಏಳಿ, ಏಳಿ, ಕ್ರೈಸ್ತಯೋಧರೆ,) ಎಂಬ ಸ್ಫೂರ್ತಿದಾಯಕವಾದ ಲೇಖನವೊಂದನ್ನು ಬರೆದ. ಆತನ ಕೃತಿಗಳಲ್ಲಿ ಅತ್ಯಂತ ಪ್ರಸಿದ್ಧವಾದುದು ಜೂಡಾಸ್ ಡೆರ್ ಎಟ್ರ್ಜ್‌ಷೆಲ್ಮ್‌ (1686-95). ಕಥಾನಿರೂಪಣೆ ಮತ್ತು ಬೋಧನಾತ್ಮಕ ಪ್ರವಚನಗಳು ಜೊತೆ ಜೊತೆಗೆ ಬರುವ ಈ ಗ್ರಂಥ ಏಸುಕ್ರಿಸ್ತನನ್ನು ರೋಮನ್ ಅಧಿಕಾರಿಗಳಿಗೆ ತೋರಿಸಿಕೊಟ್ಟು ಅವನ ಸಾವಿಗೆ ಕಾರಣನಾದ ಗುರುದ್ರೋಹಿ  ಜೂಡಾಸನನ್ನು ಕುರಿತದ್ದು. ವಿನೋದ, ವ್ಯಂಗ್ಯೋಕ್ತಿ, ವಿಡಂಬನೆ, ನೀತಿಬೋಧನೆ ಮತ್ತು ಸತ್ವ್ತಯುತವಾದ ಭಾಷಾ ಪ್ರಯೋಗ-ಇವುಗಳ ಮಿಶ್ರಣ ಸಾಂಟಕ್ಲಾರನ ಶೈಲಿಯ ವೈಶಿಷ್ಟ್ಯ. ಈ ತರದ ಬರೆಹದ ಮೂಲಕ ಜನರ ರೀತಿನೀತಿಗಳನ್ನು ಉತ್ತಮಪಡಿಸುವುದೇ ಆತನ ಉದ್ದೇಶವಾಗಿತ್ತು.                                             						   (ಎಂ.ಆರ್.; ಜಿ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ